ಯಕ್ಷಗಾನ ಪರಂಪರೆಗೆ ನಿಷ್ಠಾವಂತ ಸೇವೆಗೆ ರಾಜ್ಯೋತ್ಸವ ಪುರಸ್ಕಾರ: ಗೆಳೆಯರ ಬಳಗ 38ನೇ ವಾರ್ಷಿಕೋತ್ಸವದಲ್ಲಿ ಕೋಟ ಸುರೇಶ್ ಅಭಿಮತ

ಸಾಲಿಗ್ರಾಮ: ಯಕ್ಷಗಾನದ ರೀತಿ, ನಿಯಮಗಳ ಪರಂಪರೆಗೆ ಬದ್ದನಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಫಲವಾಗಿ ರಾಜ್ಯೋತ್ಸವ ಪುರಸ್ಕಾರ ದೊರೆತಿದೆ ಎಂದು ಖ್ಯಾತ ಯಕ್ಷಗಾನ ಕಲಾವಿದ ಕೋಟ ಸುರೇಶ್ ಹೇಳಿದರು.
ಅವರು ಶನಿವಾರ ಸಂಜೆ ಸಾಲಿಗ್ರಾಮದ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯ ಪಾರ್ವತಿ ಎಸ್. ಹೊಳ್ಳ ರಂಗಮಂಟಪದಲ್ಲಿ ನಡೆದ ಗೆಳೆಯರ ಬಳಗ (ರಿ.), ಕಾರ್ಕಡ ಇದರ 38ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ಮತ್ತು ಅರ್ಥಪೂರ್ಣ ಸೇವೆ ಸಲ್ಲಿಸಿದ ಸಂಸ್ಥೆಗಳೇ ಜನಮನದಲ್ಲಿ ಶಾಶ್ವತ ಸ್ಥಾನ ಪಡೆಯುತ್ತವೆ. ಆ ನಿಟ್ಟಿನಲ್ಲಿ ಗೆಳೆಯರ ಬಳಗವು ತನ್ನ ಅತ್ತ್ಯುತ್ತಮ ಸೇವೆಯ ಮೂಲಕ ಇಂದು ಕೂಡ ಸಮಾಜದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ಎಂದು ಅವರು ಪ್ರಶಂಸಿಸಿದರು. ಗೆಳೆಯರ ಬಳಗದಿಂದ ದೊರೆತ ಗೌರವವು ತಮ್ಮ ಕಲಾಸೇವೆಗೆ ಮತ್ತಷ್ಟು ಪ್ರೇರಣೆಯಾಗಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ಕಾರ್ಯಕ್ರಮದ ಸ್ವಾಗತ ಹಾಗೂ ಪ್ರಸ್ತಾವಿಕ ಭಾಷಣವನ್ನು ಸಂಘದ ಅಧ್ಯಕ್ಷರಾದ ತಾರಾನಾಥ್ ಹೊಳ್ಳ ವಹಿಸಿಕೊಂಡು ಮಾತನಾಡಿ, ಗೆಳೆಯರ ಬಳಗದ 38 ವರ್ಷಗಳ ಪಯಣ, ಸಮಾಜಮುಖಿ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಕೋಟ ಸಿಎ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್ ಹಂದೆ, ಸದಾಶಿವ ಮದ್ಯಸ್ಥರು (ನಿವೃತ್ತ ಅಂಚೆ ಪಾಲಕರು), ರಾಜು ಪೂಜಾರಿ (ಮಾಜಿ ಪಂಚಾಯತ್ ಸದಸ್ಯರು), ಸತ್ಯನಾರಾಯಣ (ಶಾಲಾ ಮುಖ್ಯೋಪಾಧ್ಯಾಯರು), ಪ್ರಭಾಕರ ಕಾಮತ್, ಶ್ರೀಕಾಂತ್ ಶನೈ ಉಪಸ್ಥಿತರಿದ್ದರು.
ಸನ್ಮಾನ ಪುರಸ್ಕಾರವನ್ನು ಜಗದೀಶ್ ಹೊಳ್ಳ (ನಿವೃತ್ತ ಮುಖ್ಯೋಪಾಧ್ಯಾಯರು), ವಿಘ್ನೇಶ್ವರ ಭಟ್ (ಸೀನಿಯರ್ ಇಂಜಿನಿಯರ್) ಪರವಾಗಿ ಅವರ ಸಹೋದರ ವಿಘ್ನರಾಜ್ ಭಟ್, ಪ್ರಭಾಕರ ಕಾಮತ್ (ನಿವೃತ್ತ ಮುಖ್ಯೋಪಾಧ್ಯಾಯರು), ನಾರಾಯಣ ಆಚಾರ್ (ನಿವೃತ್ತ ಅಧ್ಯಾಪಕರು) ಹಾಗೂ ಐತ ಕಾರ್ಕಡದ ಹವ್ಯಾಸಿ ಯಕ್ಷಗಾನ ಕಲಾವಿದರು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ವಿಶೇಷ ಪ್ರತಿಭಾ ಪುರಸ್ಕಾರವನ್ನು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗಾಗಿ ಕು. ನಿಧಿ ಪೈ (ಮಣೂರು) ಹಾಗೂ ನಿಧೀಶ್ ಭಟ್ (ಕಾರ್ಕಡ) ಅವರಿಗೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗಾಗಿ ಅದ್ವೈತ ಉಪಾಧ್ಯ (ಕಾರ್ಕಡ) ಅವರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವು ಸಾಂಸ್ಕೃತಿಕ ಮೌಲ್ಯಗಳು, ಸೇವಾ ಮನೋಭಾವ ಹಾಗೂ ಸಾಧಕರಿಗೆ ಸಲ್ಲಿಸಿದ ಗೌರವದ ಮೂಲಕ ಸಾರ್ಥಕತೆ ಪಡೆದುಕೊಂಡಿತು.





