ಕೋಡಿಯಲ್ಲಿ ನಿರ್ಗತಿಕ ತಾಯಿ, ಮಕ್ಕಳಿಗೆ ಪೊಲೀಸ್ ನೆರವು: ಗಂಗೊಳ್ಳಿ ಕರಾವಳಿ ಕಾವಲು ತಂಡದ ಮಾನವೀಯತೆ ಮೆರಗು

ಕುಂದಾಪುರ: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಕೋಡಿ ಗ್ರಾಮದ ಕೋಡಿ ಸೀವಾಕ್ ಸಮೀಪದ (Seevak Resto Cafe) ಬಳಿಯಲ್ಲಿ ಫೆ.12 ರಂದು ಒಬ್ಬ ಮಹಿಳೆ ತನ್ನ ಮೂರು ಚಿಕ್ಕ ಮಕ್ಕಳೊಂದಿಗೆ ದುಃಖಿತ ಸ್ಥಿತಿಯಲ್ಲಿ ನಿಂತಿರುವುದನ್ನು ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಪಿಎಸ್‌ಐ ಮುಕ್ತ ಬಾಯಿ ಹಾಗೂ ಕೋಡಿ ಬೀಟ್ ಸಿಬ್ಬಂದಿ ಎಚ್‌ಸಿ 1746 ಗೋಪಾಲ ಖಾರ್ವಿ ಅವರು ರೌಂಡ್ಸ್ ಕರ್ತವ್ಯದ ವೇಳೆ ಗಮನಿಸಿದರು.
ತಕ್ಷಣವೇ ಮಾನವೀಯತೆ ತೋರಿದ ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ವಿಚಾರಣೆ ನಡೆಸಿದಾಗ, ಆಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಂಗನಹಳ್ಳಿ ಸ್ಲಂ ನಿವಾಸಿ ಸಂಗೀತ (27), ಗಂಡ ಬದ್ರೇಶ್ ಎಂದು ತಿಳಿದುಬಂದಿದೆ.
ಆಕೆಯ ಜೊತೆಗೆ ಮೂವರು ಮಕ್ಕಳಾದ ಅಜಯ (9), ಖುಷಿ (8) ಮತ್ತು ರೋಜಾ (5) ಇದ್ದರು.
ಕುಟುಂಬದಲ್ಲಿ ದಿಕ್ಕು ದೆಸೆ ಇಲ್ಲದೆ ನಿರ್ಗತಿಕರಾಗಿ ಅಲೆಮಾರಿ ಜೀವನ ನಡೆಸುತ್ತಿದ್ದ ಸಂಗೀತ ಅವರು, ತನ್ನ ಹಾಗೂ ಮಕ್ಕಳ ಭವಿಷ್ಯಕ್ಕಾಗಿ, ವಿಶೇಷವಾಗಿ ಮಕ್ಕಳ ವಿದ್ಯಾಭ್ಯಾಸದ ಉದ್ದೇಶದಿಂದ ಸಹಾಯಕ್ಕಾಗಿ ಅಲೆದಾಡುತ್ತಿರುವುದಾಗಿ ತಿಳಿಸಿದರು.
ಮಹಿಳೆಯ ಪರಿಸ್ಥಿತಿಯನ್ನು ಮನಗಂಡ ಪೊಲೀಸ್ ಅಧಿಕಾರಿಗಳು ಅಗತ್ಯ ನೆರವು ನೀಡುವ ಕ್ರಮ ಕೈಗೊಂಡಿದ್ದು, ಸಂಬಂಧಿಸಿದ ಇಲಾಖೆಗಳೊಂದಿಗೆ ಸಂಪರ್ಕ ಸಾಧಿಸಿ ಸೂಕ್ತ ಆಶ್ರಯ ಹಾಗೂ ಸಹಾಯ ಒದಗಿಸಲು ಮುಂದಾಗಿದ್ದಾರೆ.
ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಸಿಬ್ಬಂದಿಗಳ ಈ ಮಾನವೀಯ ನಡೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ. ಪೊಲೀಸ್ ಇಲಾಖೆಯು ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಲ್ಲದೆ, ಸಂಕಷ್ಟದಲ್ಲಿರುವವರಿಗೂ ನೆರವಾಗುತ್ತಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.





