ಬೈಕ್ ಪಲ್ಟಿ: ಯಕ್ಷಗಾನ ಕಲಾವಿದರ ಪುತ್ರ ಮೃತ್ಯು

ಕುಂದಾಪುರ: ಸವಾರನ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿ ಪಲ್ಟಿ ಹೊಡೆದ ಪರಿಣಾಮ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಬೈಂದೂರು ತಾಲೂಕಿನ ನಾಡಗುಡ್ಡೆಯಂಗಡಿಯ ಬೆಳ್ಳಾಡಿ ಪ್ರದೇಶದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಮೃತರನ್ನು ಕೋಟ ಮಣೂರು ಪಡುಕರೆ ನಿವಾಸಿ ಪ್ರಭಾಕರ್ ಮೆಂಡನ್ ಎಂದು ಗುರುತಿಸಲಾಗಿದೆ. ಅವರು ಭಾನುವಾರ ರಾತ್ರಿ ತಮ್ಮ ನಿವಾಸ ಮಣೂರು ಪಡುಕರೆಯಿಂದ ಪತ್ನಿಯ ಮನೆಗೆ ತೆರಳುತ್ತಿದ್ದ ವೇಳೆ, ನಾಡಗುಡ್ಡೆಯಂಗಡಿಯ ಬೆಳ್ಳಾಡಿ ಬಳಿ ಅವರ ಬೈಕ್ ಏಕಾಏಕಿ ಸ್ಕಿಡ್ ಆಗಿ ರಸ್ತೆಯಲ್ಲಿ ಪಲ್ಟಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡ ಪ್ರಭಾಕರ್ ಮೆಂಡನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಕುರಿತು ಮೃತರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೃತ ಪ್ರಭಾಕರ್ ಮೆಂಡನ್ ಅವರು ಖ್ಯಾತ ಯಕ್ಷಗಾನ ಕಲಾವಿದ ದಿವಂಗತ ಮೊಳಹಳ್ಳಿ ಹೆರಿಯ ನಾಯಕ್ ಅವರ ಹಿರಿಯ ಪುತ್ರರಾಗಿದ್ದು, ಅವರ ಅಕಾಲಿಕ ನಿಧನದಿಂದ ಕುಟುಂಬದವರಲ್ಲಿ ಆಳವಾದ ಶೋಕದ ವಾತಾವರಣ ಆವರಿಸಿದೆ. ಮೃತರು ಪತ್ನಿ, ಒಬ್ಬ ಗಂಡು ಹಾಗೂ ಒಬ್ಬ ಹೆಣ್ಣು ಮಗುವನ್ನು ಅಗಲಿದ್ದಾರೆ.





