ಸುಣ್ಣಾರಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ‘ಬೆಸುಗೆ-2026’ ಬೇಸಿಗೆ ಶಿಬಿರಕ್ಕೆ ಚಾಲನೆ: ​ಸೃಜನಾತ್ಮಕ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಚೆಸ್ ಕ್ರೀಡಾಪಟು ಆರಾಧ್ಯ ಶೆಟ್ಟಿ

ಕುಂದಾಪುರ, ಏ.21: ವಿದ್ಯಾರ್ಥಿಗಳು ಪಠ್ಯಪುಸ್ತಕ ಮತ್ತು ಮೊಬೈಲ್ ಪರದೆಗಳಲ್ಲೇ ಸೀಮಿತವಾಗದೆ, ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಮಗ್ರ ವ್ಯಕ್ತಿತ್ವ ವಿಕಸನ ಸಾಧ್ಯವೆಂದು ರಾಷ್ಟ್ರಮಟ್ಟದ ಚೆಸ್ ಕ್ರೀಡಾಪಟು ಕುಮಾರಿ ಆರಾಧ್ಯ ಎಸ್. ಶೆಟ್ಟಿ ಅಭಿಪ್ರಾಯಪಟ್ಟರು.

ತಾಲೂಕಿನ ಸುಣ್ಣಾರಿ ಪ್ರದೇಶದಲ್ಲಿರುವ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಲಾದ “ಬೆಸುಗೆ–2026” ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ಪರಿಸರಗಳಿಂದ ಬಂದ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಈ ಶಿಬಿರವು ಬೆಟ್ಟದ ನೆಲ್ಲಿಕಾಯಿಯಂತಿದ್ದು, ಅನುಭವಗಳ ವಿನಿಮಯಕ್ಕೆ ಅತ್ಯುತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಮಾತನಾಡಿ ನಾಯಕತ್ವ ಎಂದರೆ ಕೇವಲ ಆದೇಶ ನೀಡುವುದಲ್ಲ, ಭವಿಷ್ಯಕ್ಕೆ ದಾರಿ ತೋರಿಸುವುದಾಗಿದೆ ಎಂದು ತಿಳಿಸಿದರು. ಮಕ್ಕಳ ಮನಸ್ಸನ್ನು ಸಮರ್ಪಕವಾಗಿ ರೂಪಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂಬ ಸಂದೇಶವನ್ನು ಅವರು ಕಥೆಗಳು ಹಾಗೂ ಉದಾಹರಣೆಗಳ ಮೂಲಕ ಮನದಟ್ಟುಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ಮಾತನಾಡಿ, ಆರಂಭದಲ್ಲಿ 150 ವಿದ್ಯಾರ್ಥಿಗಳನ್ನು ನಿರೀಕ್ಷಿಸಿದ್ದರೂ ಪೋಷಕರ ಅಪಾರ ಸ್ಪಂದನೆಯಿಂದ 300ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರಕ್ಕೆ ನೋಂದಾಯಿಸಿಕೊಂಡಿರುವುದು ಸಂತಸದ ವಿಷಯ ಎಂದರು. ಸಾಧಕರ ಅನುಭವಗಳು ಮಕ್ಕಳಿಗೆ ಪ್ರೇರಣೆಯಾಗಲೆಂದು ಆರಾಧ್ಯ ಶೆಟ್ಟಿಯವರಿಂದ ಶಿಬಿರ ಉದ್ಘಾಟನೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಾಂಶುಪಾಲ ನಾಗರಾಜ ಶೆಟ್ಟಿ ಮಾತನಾಡಿ ಮೊಬೈಲ್ ವ್ಯಸನದಿಂದ ದೂರವಿಟ್ಟು, ಮಕ್ಕಳನ್ನು ಸಾಮಾಜಿಕ ಮತ್ತು ಪ್ರಾಯೋಗಿಕ ಚಟುವಟಿಕೆಗಳಿಗೆ ಸೆಳೆಯಲು ಈ ಶಿಬಿರ ಪೂರಕವಾಗಿದೆ ಎಂದು ಹೇಳಿದರು. ಐದು ದಿನಗಳ ಈ ಶಿಬಿರವು ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು, ಸಂಸ್ಕಾರ ಮತ್ತು ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜಿನಿ ಪಿ. ಆಚಾರ್ಯ, ಸಿಬಿಎಸ್‌ಇ ವಿಭಾಗದ ಸಂಯೋಜಕಿ ಶ್ರೀಮತಿ ವಿಶಾಲ ಶೆಟ್ಟಿ ಉಪಸ್ಥಿತರಿದ್ದರು. ಸರೋಜಿನಿ ಪಿ. ಆಚಾರ್ಯ ಸ್ವಾಗತಿಸಿದರು. ಶಿಕ್ಷಕ ಸಂದೀಪ್ ಕಾರ್ಯಕ್ರಮ ನಿರೂಪಿಸಿದರು. ವಿಶಾಲ ಶೆಟ್ಟಿ ವಂದನಾರ್ಪಣೆ ಮಾಡಿದರು. ಶಿಕ್ಷಕ ವೃಂದ, ಪೋಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Join WhatsApp

Join Now

Join Telegram

Join Now

Read more

ಕುಂದಾಪುರ: ವಿದ್ಯಾರಣ್ಯ ಕ್ಯಾಂಪಸ್ ಯಡಾಡಿ-ಮತ್ಯಾಡಿಯಲ್ಲಿ ಗುರುವಂದಾನ ಕಾರ್ಯಕ್ರಮ

ವಿದ್ಯಾರಣ್ಯ ಅಂಗಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಕರಾವಳಿ ಸೊಗಡಿನ ವೇಷ ಭೂಷಣ,ಶಾಸ್ತ್ರ, ಸಂಪ್ರದಾಯಗಳ ವೈಭವದ ಮೆರವಣಿಗೆ

ಕೋಟ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ರಘು ಮಧ್ಯಸ್ಥ ಅವಿರೋಧ ಆಯ್ಕೆ

ಸುಜ್ಞಾನ ವಿದ್ಯಾ ಸಂಸ್ಥೆಯಲ್ಲಿ ‘ವಾಲ್ಬೆಲ್ಲ’ ಕುಂದಾಪ್ರ ಕನ್ನಡದ ಸಂಸ್ಕೃತಿ ಸಮಾರಂಭದ ಸಮಾರೋಪ: ಯುವಜನತೆ ದುಶ್ಚಟಗಳಿಂದ ದೂರವಿದ್ದು ಗುರಿಯತ್ತ ಸಾಗಬೇಕು – ಕೆ. ಜಯಪ್ರಕಾಶ್ ಹೆಗ್ಡೆ

ಸುಜ್ಞಾನದಂಗಳದಿ ವಾಲ್ಬೆಲ್ಲದ ಸವಿ ಸಂಭ್ರಮ: ಕುಂದಾಪ್ರ ಕನ್ನಡದ ಅಭಿವೃದ್ಧಿಗೆ ದಿಟ್ಟ ಹೆಜ್ಜೆ: ಕುಂದಾಪ್ರ ಕನ್ನಡದ ಸವಿ ಉಳಿಸಿ ಬೆಳಸುವ ಜವಾಬ್ದಾರಿ ನಮ್ಮದು.ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ

ವಿದ್ಯಾರಣ್ಯ ಶಾಲೆ ಯಡಾಡಿ – ಮತ್ಯಾಡಿಯಲ್ಲಿ ಜುಲೈ 6 ರಂದು ಕುಂದಾಪ್ರ ಕನ್ನಡ ‘ವಾಲ್ಪೆಲ್ಲ’ ಕಾರ್ಯಕ್ರಮ: ಕುಂದಾಪ್ರ ಕನ್ನಡದ ಅಭಿಮಾನ ಬೆಳೆಸಿ ಕೊಳ್ಳ ಬೇಕು – ಕೆ. ಜಯಪ್ರಕಾಶ್ ಹೆಗ್ಡೆ

Leave a Comment