ಕೋಡಿ ಕನ್ಯಾನದ ಕಡಲ ತಡಿಯಲ್ಲಿ ಅದ್ದೂರಿ ‘ಜನಪದ ಸಿರಿ’ ಸಂಭ್ರಮ: ಜಾನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ನಾವು ವಿಫಲರಾಗಿದ್ದೇವೆ – ಶಂಕರ್ ಕುಂದರ್

ಸಾಸ್ತಾನ: ಬ್ರಾಹ್ಮೀ ಗ್ರೂಪ್ಸ್ ಕೋಡಿ ಕನ್ಯಾನ, ವಿಶ್ವಮಾನವ ಫೌಂಡೇಶನ್ ಗುರುಮಿಠಕಲ್, ಯಾದಗಿರಿ, ತಸ್ಮಯ್ ಪ್ರೊಡಕ್ಷನ್ ಇವರ ಜಂಟಿ ಆಶ್ರಯದಲ್ಲಿ ನಡೆದ ಜನಪದ ಸಿರಿ ಭಾನುವಾರ ಸಂಜೆ ಕೋಡಿ ಕನ್ಯಾನದ ಕಡಲ ತಡಿಯಲ್ಲಿ ಸಾಕಾರಗೊಂಡಿತು.
ಆಧುನಿಕ ಸಂಗೀತದ ಅಬ್ಬರಕ್ಕೆ ಜನಪದ ಪ್ರಕಾರಗಳ ಮರೆ :ಶಾಸಕ ಕಿರಣ್ ಕುಮಾರ್ ಕೊಡ್ಗಿ.

ಸಹಸ್ರಾರು ವರ್ಷದಿಂದ ಜನರ ಕೊಡುಗೆಯಾಗಿ ಬಂದ ಜನಪದ ಎನ್ನುವ ಕಲೆ,ಇಂದಿನಿಂದ ಪಾಶ್ಚಾತ್ಯ ಸಂಗೀತದ ಅಬ್ಬರದಲ್ಲಿ ಮರೆಯಾಗುವ ಆತಂಕ ಮೂಡಿಸುತ್ತಿದೆ ಎಂದು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಅಭಿಪ್ರಾಯ ವ್ಯಕ್ತ ಪಡಿಸಿದರು. ಜನಪದ ಕಲೆ ಉಳಿಯ ಬೇಕಾದಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡುವ ಮನಸ್ಸನ್ನು ಸ್ಥಳೀಯ ಸಂಘ ಸಂಸ್ಥೆಗಳು ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಜನಪದ ಕಲೆಗೆ ಪ್ರೋತ್ಸಾಹ ಅಗತ್ಯ: ಮಾಜೀ ಸಚಿವರು ಮತ್ತು ಮಾಜೀ ಸಂಸದ ಜಯಪ್ರಕಾಶ್ ಹೆಗ್ಡೆ.
ಜನಪದ ಕಲೆಯನ್ನು ಆಯೋಜನೆ ಮಾಡುವ ಮೂಲಕ ಮತ್ತೆ ಅಂತಹ ಕಾರ್ಯಕ್ರಮವನ್ನು ನೋಡುವುದರ ಮೂಲಕ ಜನಪದ ಕಲೆಯನ್ನು ಪ್ರೋತ್ಸಾಹ ನೀಡಬಹುದು ಎಂದರು.

ಜನಪದ ಹಾಡಿನ ಮೂಲಕ ಖ್ಯಾತಿ ಪಡೆದ ದಿವಂಗತ ಗಣೇಶ್ ಗಂಗೊಳ್ಳಿ ಇವರು ಇಂದು ನಮ್ಮೊಂದಿಗೆ ಇಲ್ಲದೆ ಇದ್ದರೂ ಕೂಡ ಅವರ ಹಾಡುಗಳ ನೆನಪು ಸದಾ ನಮ್ಮೊಡನೆ ಇದೆ ಎಂದು ನುಡಿದರು.

ಜನಪದ ಕಲೆ ಬೆಳೆಸುವಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಬೇಜವಾಬ್ದಾರಿ. ಶಂಕರ್ ಕುಂದರ್ ಆಕ್ರೋಶ.
ಜನಪದ ಕಾರ್ಯಕ್ರಮದ ಆಯೋಜನೆಯ ಪ್ರಮುಖರಾದ ಹಿರಿಯ ರಾಜಕಾರಣಿ ಮತ್ತು ಉದ್ಯಮಿಗಳಾದ ಶಂಕರ್ ಕುಂದರ್ ಮಾತನಾಡಿ ಯಕ್ಷಗಾನ ಮತ್ತು ಜನಪದ ಕಲೆ ಎನ್ನುವುದು ಕರ್ನಾಟಕದ ಹೆಮ್ಮೆ. ಆದರೆ ಇದನ್ನು ಉಳಿಸಿ ಬೆಳೆಸುವಲ್ಲಿ ನಾವು ಇಂದು ಸೊತ್ತಿದ್ದೇವೆ. ಕಾರಣ ನಮ್ಮ ಕನ್ನಡ ಸಂಸ್ಕೃತಿ ಇಲಾಖೆಯ ಬೇಜವಾಬ್ದಾರಿಯೇ ಕಾರಣ ಎಂದು ಆಕ್ರೋಶ ವ್ಯಕ್ತ ಪಡಿಸಿದರು.35 ವರ್ಷದ ಹಿಂದೆ ತಾನು ಮುಂಚೂಣಿಯಲ್ಲಿ ನಿಂತು,ಮೈತ್ರಿ ಕಲಾ ಸಂಘ ಮತ್ತು ಸರಸ್ವತಿ ಕಲಾ ಸಂಘದೊಂದಿಗೆ ಡೊಳ್ಳು ಕುಣಿತ, ವೀರಗಾಸೆ ಮುಂತಾದ ಜನಪದ ಕಾರ್ಯಕ್ರಮ ಆಯೋಜನೆ ಮಾಡಿ ಕುಣಿದು ಸಂಭ್ರಮಿಸಿದ ನೆನಪು ಮೆಲುಕು ಹಾಕಿದರು.



ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಯಕ್ಷಗಾನ ಕಲಾವಿದ ಕೋಟ ಸುರೇಶ್ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೊರಗ ಪೂಜಾರಿ, ರಮೇಶ್ ತಿಂಗಳಾಯ, ರಾಘವೇಂದ್ರ ಕರ್ಕೇರ ಇವರನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಕೋಟ CA ಬ್ಯಾಂಕ್ ಅಧ್ಯಕ್ಷರಾದ ಕ್ರಷ್ಣ ಕಾಂಚನ್, ಉದ್ಯಮಿ ಶಂಕರ್ ಬಂಗೇರ, ಜಯಂತ್ ಅಮೀನ್. ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರವೀಶ್ ಕೊರವಾಡಿ, ಕಾರ್ಯಕ್ರಮ ಸಂಯೋಜಕ ಸತೀಶ್ ತಿಂಗಳಾಯ,ಉಪಸ್ಥಿತರಿದ್ದರು.
ಶಂಕರ್ ದಾಸ್ ಪ್ರಾರ್ಥಿಸಿ, ಮಂಜುನಾಥ್ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು.





