ವಿದ್ಯಾರಣ್ಯ ಅಂಗಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಕರಾವಳಿ ಸೊಗಡಿನ ವೇಷ ಭೂಷಣ,ಶಾಸ್ತ್ರ, ಸಂಪ್ರದಾಯಗಳ ವೈಭವದ ಮೆರವಣಿಗೆ.
ಕುಂದಾಪುರ: ಸುಜ್ಞಾನ ಎಜುಕೇಶನಲ್ ಟ್ರಸ್ಟ್, ಕುಂದಾಪುರ ಮತ್ತು ಸುಜ್ಞಾನ ಪದವಿಪೂರ್ವ ಕಾಲೇಜು ಕುಂದಾಪುರ ಹಾಗೂ ಸುಜ್ಞಾನ ನ್ಯಾಷನಲ್ ಪದವಿಪೂರ್ವ ಕಾಲೇಜು ಬಾರಕೂರು,ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್, ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್ ಇವರ ಆಶ್ರಯದಲ್ಲಿ ಯಡಾಡಿ-ಮತ್ಯಾಡಿಯ ಇಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಾಂಪ್ರದಾಯಿಕವಾಗಿ ಸೆ.4ರಂದು ಆಚರಿಸಲಾಯಿತು.

ಕರಾವಳಿ ಖ್ಯಾತಿಯ ಹುಲಿ ವೇಷ ಸ್ಪರ್ಧೆ,ಮೊಸರು ಕುಡಿಕೆ ಒಡೆಯುವ ಸ್ಪರ್ಧೆ, ದಾಂಡಿಯಾ ನೃತ್ಯ, ಚಂಡೆ ವಾದನ, ಕುಣಿತ ಭಜನೆ ವಿದ್ಯಾರ್ಥಿಗಳಿಗೆ ವಿಶೇಷ ಅನುಭವ ಮತ್ತು ಮುದ ನೀಡಿತು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ವಕೀಲರಾದ ಎ ಎಸ್ ಎನ್ ಹೆಬ್ಬಾರ್ ಉದ್ಘಾಟಿಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ, ಭಕ್ತಿ ಪೂರಕವಾಗಿ ಆಚರಿಸಿದ ಕೀರ್ತಿ ಈ ಸುಜ್ಞಾನ ವಿದ್ಯಾ ಸಂಸ್ಥೆಯದು.
ರಾಮಾಯಣ, ಮಹಾಭಾರತ, ಭಗವದ್ಗೀತೆ, ಯೋಗ, ಆಯುರ್ವೇದವನ್ನು ಜಗತ್ತಿಗೆ ಕೊಟ್ಟ ಕೀರ್ತಿ ನಮ್ಮ ಭಾರತಕ್ಕಿದೆ.
ದೇಶದ ಆರ್ಥಿಕತೆಯನ್ನು ಬಲಗೊಳಿಸುವಲ್ಲಿ, ಹಬ್ಬಗಳ ಆಚರಣೆಯಿಂದ ಅದೆಷ್ಟೋ ಮಂದಿಗೆ ಉದ್ಯೋಗ ನೀಡಿದೆ. ಶ್ರೀ ಕೃಷ್ಣ ಭಗವದ್ಗೀತೆಯ ಮೂಲಕ ಸಾರಿರುವ ಸಂದೇಶವನ್ನು ಜೀವನದಲ್ಲಿ ಅನುಸರಿಸುವುದರೊಂದಿಗೆ ಸನ್ಮಾರ್ಗದಲ್ಲಿ ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಹಬ್ಬಗಳನ್ನು ನಮ್ಮ ಸಂಸ್ಥೆಯಲ್ಲಿ ಸಂಪ್ರದಾಯ ಬದ್ಧವಾಗಿ ಆಚರಿಸಿಕೊಂಡು ಬಂದಿದ್ದೇವೆ.
ನಮ್ಮ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸಿಕೊಂಡು ಶಿಕ್ಷಣದ ಜೊತೆಯಲ್ಲಿ ಸಮಗ್ರ ಅಭಿವೃದ್ಧಿಯಾಗಬೇಕು ಎಂದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕೋಶಾಧಿಕಾರಿ ಭರತ್ ಶೆಟ್ಟಿ ಸ್ವಾಗತಿಸಿ, ಹಬ್ಬ ಆಚರಣೆಯ ಮೂಲಕ ನಮ್ಮ ಆಚಾರ ವಿಚಾರ ಸಂಸ್ಕೃತಿ ಧಾರ್ಮಿಕ ಆಚರಣೆಗಳು ಗಟ್ಟಿಯಾಗಿ ನೆಲೆಯೂರಬೇಕು ಎಂಬ ಉದ್ದೇಶ ನಮ್ಮದಾಗಿದೆ ಎಂದರು.

ಸುಜ್ಞಾನ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಉಡುಪಿಯಲ್ಲಿ ಯಾವ ರೀತಿಯಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದಾರೋ ಹಾಗೆಯೇ ನಮ್ಮಲ್ಲಿಯೂ ಸಹ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ ಎಂದರು.
ಆರಂಭದಲ್ಲಿ ಬಾಲಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಹಿರಿಯ ವಕೀಲ ಎಎಸ್ಎನ್ ಹೆಬ್ಬಾರ್ ಚಾಲನೆ ನೀಡಿದರು. ನಂತರ ವಿವಿಧ ವೇಷ ಭೂಷಣಗಳೊಂದಿಗೆ ವೈಭವದ ಮೆರವಣಿಗೆ ನಡೆಯಿತು. ತೊಟ್ಟಿಲ ಸಂಭ್ರಮ, ಶ್ರೀಕೃಷ್ಣನಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ, ಭಜನೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಜತ್ ಶೆಟ್ಟಿ, ಬಾರ್ಕೂರು ಸುಜ್ಞಾನ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರದೀಪ್ ಶೆಟ್ಟಿ, ವಿದ್ಯಾರಣ್ಯ ಗ್ಲೋಬಲ್ ಶಾಲೆಯ ಮುಖ್ಯ ಶಿಕ್ಷಕಿ ಅನಿತಾ ಉಪ ಮುಖ್ಯ ಶಿಕ್ಷಕಿ ರೂಪಾ, ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು. ಸಂಸ್ಕೃತ ಶಿಕ್ಷಕ ರಜತ್ ಭಟ್ ಕಾರ್ಯಕ್ರಮ ನಿರ್ವಹಿಸಿದ್ದರು.





