
ಕುಂದಾಪುರ : ಕ್ರೀಡೆಯಲ್ಲೂ ಕೂಡ ಸಾಧನೆ ಮಾಡುವಂತಹ ವಿದ್ಯಾರ್ಥಿಗಳಿಗೆ, ರಾಜ್ಯ ಸರ್ಕಾರದಲ್ಲಿ ಶೇ. 2ರಷ್ಟು ಪೊಲೀಸ್ ಇಲಾಖೆಯಲ್ಲಿ ಶೇ. 3 ರಷ್ಟು ಮೀಸಲಾತಿ ಇರುವುದು ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ವಾರದಾನವಾಗಿದೆ ಎಂದು ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಹಾಗೂ ಪೋಲಿಸ್ ಅಧಿಕಾರಿ ನವೀನ್ ಕಾಂಚನ್ ತಿಳಿಸಿದರು.

ಸುಣ್ಣಾರಿಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜ್ ಮತ್ತು ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾದ ಆಡೋಣ ಬಾ ಎನ್ನುವ,15 ದಿನಗಳ ಉಚಿತ ಬೇಸಿಗೆ ಕ್ರೀಡಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂತಹ ಉಚಿತ ಕ್ರೀಡಾ ಶಿಬಿರವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಕ್ರೀಡಾಪಟುವಾಗಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆ ನೀಡಬೇಕು. ಅದು ಸಾಧ್ಯವಾದಗ ಇಂತಹ ಶಿಬಿರಗಳಿಗೆ ಬೆಲೆ. ಅಲ್ಲದೇ ನೀವು ಸಾಧನೆ ಮಾಡಿ ಭವಿಷ್ಯದಲ್ಲಿಯೂ ಕೂಡ ಉತ್ತಮ ಸ್ಥಾನ ಪಡೆಯ ಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ ಎಂ ಹೆಗ್ಡೆ ಎಜುಕೇಶನ್ನಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ಮಾತನಾಡಿ ಅರೋಗ್ಯವಂತ ದೇಹದಲ್ಲಿ ಸದ್ರಢ ಶಿಕ್ಷಣ ಸಾಧ್ಯ. ಕ್ರೀಡೆ ಎನ್ನುವುದು ದಿನನಿತ್ಯದ ಅವಿಭಾಜ್ಯ ಅಂಗವಾಗಿ ಬೆಳಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಕ್ರೀಡೆಗಾಗಿ ಎಕ್ಸಲೆಂಟ್ ವಿದ್ಯಾ ಸಂಸ್ಥೆ 2 ಎಕರೆ ಜಾಗ ಖರೀದಿ ಮಾಡಿದ್ದು, ಮುಂದಿನ ದಿನಗಳಲ್ಲಿ ಸುಸಜ್ಜಿತ ಕ್ರೀಡಾ ಮೈದಾನ ರಚನೆಗೊಳ್ಳಲಿದೆ ಎಂದರು. ಶಿಕ್ಷಣದ ಶಿಸ್ತಿಗಾಗಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಮೊಬೈಲ್ ನಿಷೇದ ಮಾಡಲಾಗಿದೆ.
SSLC ಪರೀಕ್ಷೆಯಲ್ಲಿ 500 ಮಿಕ್ಕಿ ಅಂಕ ಪಡೆದು ತೇರ್ಗಡೆಯಾದ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಾವುಂದ ಸರಕಾರಿ ಶಾಲಾ ದೈಹಿಕ ಶಿಕ್ಷಕರಾದ ಜೀವನ್ ಕುಮಾರ್ ಶೆಟ್ಟಿ ಮಾತನಾಡಿ, ಮೈದಾನದಲ್ಲಿ ಬೆವರು ಸುರಿಸಿದಲ್ಲಿ ಆಸ್ಪತ್ರೆಗಳ ಮುಂದೆ ಕ್ಯೂ ನಿಲ್ಲುವುದನ್ನು ತಪ್ಪಿಸಬಹುದು. ಇಂದು ಕ್ಲಿನಿಕ್ ಮತ್ತು ಆಸ್ಪತ್ರೆಗಳ ಮುಂದೆ ಸರತಿ ಸಾಲು ಸಾಮಾನ್ಯವಾಗಿದೆ. ಕಾರಣ ದೇಹಕ್ಕೆ ಸಿಗಬೇಕಾದ ವ್ಯಾಯಾಮ ಕಡಿಮೆಯಾದ ಪರಿಣಾಮ. ಆದ್ದರಿಂದ ಶಿಕ್ಷಣದಂತೆ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡಬೇಕು ಎಂದರು.

ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಮಾತಾನಾಡಿ, ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರ ಎನ್ನುವುದು ತ್ರಿವೇಣಿ ಸಂಗಮವಾದಲ್ಲಿ ಮಾತ್ರ ವಿದ್ಯಾರ್ಥಿಗಳ ಮನೋವಿಕಸನವಾಗುವುದು. ನಾಲ್ಕು ಗೋಡೆಗಳ ಮಧ್ಯೆ ಅಕ್ಷರಭ್ಯಾಸ ಮಾಡಿದರೆ ಸಾಲದು. ನಮ್ಮ ವಿದ್ಯಾ ಸಂಸ್ಥೆಯ ಅಧ್ಯಕ್ಷರು ಕೂಡ ಕ್ರೀಡಾಸಕ್ತರು. ಆದ್ದರಿಂದ ಇಂತಹ ಉಚಿತ ಕ್ರೀಡಾ ಶಿಬಿರ ಆಯೋಜಿಸಲಾಗಿದೆ. ನಮ್ಮ ವಿದ್ಯಾರ್ಥಿಗಳು, ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆ ನೀಡಿ ಪ್ರಶಸ್ತಿ ಪಡೆದಿರುತ್ತಾರೆ. ಅಲ್ಲದೇ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕೂಡ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಪ್ರದರ್ಶನ ನೀಡಿ ಪ್ರಶಸ್ತಿ ತಂದು ವಿದ್ಯಾ ಸಂಸ್ಥೆಯ ಹೆಸರನ್ನು ಉತ್ತುಂಗಕ್ಕೆ ಕೊಂಡು ಹೋಗಿದ್ದಾರೆ. ಆದ್ದರಿಂದ ಇಲ್ಲಿನ ಪರಿಸರದ ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಕ್ರೀಡಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.



ಮುಖ್ಯ ಅತಿಥಿಗಳಾಗಿ ಉದ್ಯಮಿ ಸದಾನಂದ ಶ್ಯಾನುಭೋಗ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ದಿನಕರ್ ಹೆಗ್ಡೆ, ದೈಹಿಕ ಶಿಕ್ಷಕ ವಿಖ್ಯಾತ, ತರುಬೇತುದಾರರಾದ ಸುದರ್ಶನ್ ಆಚಾರ್ಯ, ವಿಶಾಲ್ ಖಾರ್ವಿ, ಸಂದೇಶ ಜೋಗಿ, ಕ್ರೀಡಾಪಟುಗಳಾದ ಪವನ್ ಶೆಟ್ಟಿ, ಪ್ರತೀಕ್ ಉಪಸ್ಥಿತರಿದ್ದರು.
ಮುಖ್ಯ್ಯೊಪಾಧ್ಯಾಯಿನಿ ಸರೋಜಿನಿ. ಪಿ ಆಚಾರ್ಯ, ಸ್ವಾಗತಿಸಿ, ಅಧ್ಯಾಪಕ ರಶೀಕ್ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ವಿಶಾಲ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.





