ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘದ ‘ರೈತ ಸೌಧ’ ಜನಸೇವೆಗೆ ಶುಭ ಮುಹೂರ್ತ – ಮಾಚ್‌ 14 ರಂದು ಉದ್ಘಾಟನೆ ​

ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘದ ‘ರೈತ ಸೌಧ’ ಜನಸೇವೆಗೆ ಶುಭ ಮುಹೂರ್ತ – ಮಾಚ್‌ 14 ರಂದು ಉದ್ಘಾಟನೆ


ಸಿದ್ದಾಪುರ: ಸ್ಥಳೀಯ ಕೃಷಿಕರ ಆರ್ಥಿಕ ಬೆನ್ನೆಲುಬಾಗಿರುವ, ದಶಕಗಳ ಇತಿಹಾಸ ಹೊಂದಿರುವ ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘವು ಅಭಿವೃದ್ಧಿಯ ಪಥದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಸಂಘದ ನೂತನ ಸುಸಜ್ಜಿತ ಆಡಳಿತ ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣ ‘ರೈತ ಸೌಧ’ ಇದೇ ಮಾರ್ಚ್ 14ರ ಶನಿವಾರದಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

​ಬುಧವಾರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತರ ಸರ್ವತೋಮುಖ ಏಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಲಾದ ಈ ಸುಸಜ್ಜಿತ ಕಟ್ಟಡದ ಕುರಿತು ಮಾಹಿತಿ ನೀಡಿದರು.

ಆರ್ಥಿಕ ಸದೃಢತೆ ಮತ್ತು ಇತಿಹಾಸ:
​1997-98ರಲ್ಲಿ ಶಂಕರನಾರಾಯಣ ಸಂಘದಿಂದ ವಿಭಜನೆಗೊಂಡು ಸ್ವತಂತ್ರವಾಗಿ ಅಸ್ತಿತ್ವಕ್ಕೆ ಬಂದ ಅಂಪಾರು ಸಹಕಾರಿ ಸಂಘವು ಇಂದು ಜಿಲ್ಲೆಯಲ್ಲೇ ಅತ್ಯಂತ ಸದೃಢ ಸಂಸ್ಥೆಯಾಗಿ ಬೆಳೆದಿದೆ. ಕೇವಲ ಒಂದು ಗ್ರಾಮಕ್ಕೆ ಸೀಮಿತವಾಗಿದ್ದರೂ, ಸುಮಾರು ₹55.87 ಕೋಟಿ ಠೇವಣಾತಿ ಹಾಗೂ ₹55.78 ಕೋಟಿ ಸಾಲ ವಿತರಣೆ ಮಾಡುವ ಮೂಲಕ ಬೃಹತ್ ಮಟ್ಟದ ವಹಿವಾಟು ನಡೆಸುತ್ತಿದೆ. 3,608 ‘ಎ’ ತರಗತಿಯ ಸದಸ್ಯರನ್ನು ಹೊಂದಿರುವ ಸಂಘವು, ₹2.01 ಕೋಟಿ ಪಾಲು ಬಂಡವಾಳದೊಂದಿಗೆ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

​’ರೈತ ಸೌಧ’ದ ವಿಶೇಷತೆಗಳು:
​ಹಳೆಯ ಕಟ್ಟಡದ ಸ್ಥಳಾವಕಾಶದ ಕೊರತೆಯನ್ನು ನೀಗಿಸಲು ಹಾಗೂ ಮುಂದಿನ 50 ವರ್ಷಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಆಧುನಿಕ ಕಟ್ಟಡವನ್ನು ನಿರ್ಮಿಸಲಾಗಿದೆ.
​ನೆಲ ಅಂತಸ್ತುನಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಕ್ಕಾಗಿ ಸುಸಜ್ಜಿತ ಗೋದಾಮು (Warehouse) ಹಾಗೂ ವ್ಯವಸ್ಥಿತ ಪಡಿತರ ವಿತರಣಾ ಘಟಕಕ್ಕೆ ಅವಕಾಶ ನೀಡಲಾಗಿದೆ.
​ಪ್ರಥಮ ಅಂತಸ್ತುನಲ್ಲಿ ಸಂಪೂರ್ಣ ಗಣಕೀಕೃತಗೊಂಡ ಸುಸಜ್ಜಿತ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲಿ ಕಾರ್ಯನಿರ್ವಹಿಸಲಿದೆ.

ಇ-ಸ್ಟಾಂಪಿಂಗ್ ಸೌಲಭ್ಯ: ಸಾರ್ವಜನಿಕರು ಇ-ಸ್ಟಾಂಪ್‌ಗಾಗಿ ದೂರದ ಸಿದ್ದಾಪುರ ಅಥವಾ ಕೊಲ್ಲೂರುಗಳಿಗೆ ಹೋಗುವುದನ್ನು ತಪ್ಪಿಸಲು, ಸಂಘದ ಸಾಮಾನ್ಯ ಸೇವಾ ಕೇಂದ್ರ (CSC) ಮೂಲಕ ಈ ಸೌಲಭ್ಯವನ್ನು ಆರಂಭಿಸಲಾಗುತ್ತಿದೆ.

ಆಧುನಿಕ ಸಭಾಂಗಣಗಳು: ದ್ವಿತೀಯ ಅಂತಸ್ತಿನಲ್ಲಿ ಸಹಕಾರಿ ದಿಗ್ಗಜರ ಸ್ಮರಣಾರ್ಥ ಎರಡು ಪ್ರಮುಖ ಸಭಾಂಗಣಗಳನ್ನು ನಿರ್ಮಿಸಲಾಗಿದೆ.
​ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸಭಾಂಗಣ: 250-300 ಆಸನ ಸಾಮರ್ಥ್ಯ ಹೊಂದಿದ್ದು, ಸ್ಥಳೀಯ ಶುಭ ಸಮಾರಂಭಗಳಿಗೆ ಲಭ್ಯವಿರಲಿದೆ.

​ಮೊಳಹಳ್ಳಿ ಶಿವರಾಯರ ಸಭಾಂಗಣ: ವಿವಿಧ ಸಂಘ-ಸಂಸ್ಥೆಗಳ ಸಭೆ ಮತ್ತು ತರಬೇತಿಗಳಿಗೆ ವೇದಿಕೆಯಾಗಲಿದೆ.
ಲಿಫ್ಟ್ ಸೌಲಭ್ಯ: ಹಿರಿಯ ನಾಗರಿಕರು ಮತ್ತು ರೈತರ ಅನುಕೂಲಕ್ಕಾಗಿ ಇಡೀ ಕಟ್ಟಡಕ್ಕೆ ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ.

​ಉದ್ಘಾಟನಾ ಸಮಾರಂಭ ಮತ್ತು ಅತಿಥಿಗಳು:
​ಮಾರ್ಚ್ 14ರಂದು ಬೆಳಗ್ಗೆ 10:30ಕ್ಕೆ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಅಮೃತ ಹಸ್ತದಿಂದ ‘ರೈತ ಸೌಧ’ ಉದ್ಘಾಟನೆಗೊಳ್ಳಲಿದೆ. ಸಮಾರಂಭದಲ್ಲಿ ಎಂ.ಎಲ್.ಸಿ ಮಂಜುನಾಥ್ ಭಂಡಾರಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕರಾದ ಗೋಪಾಲ್ ಪೂಜಾರಿ ಹಾಗೂ ಸುಕುಮಾರ್ ಶೆಟ್ಟಿ, ಐಕಳ ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಮಹೇಶ್ ಹೆಗ್ಡೆ, ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ್ ಶೆಟ್ಟಿ ಸೇರಿದಂತೆ ಸಹಕಾರಿ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ವೈಭವ
​ಉದ್ಘಾಟನೆಯ ಅಂಗವಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದು ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ತಿಳಿಸಿದರು.
​ಬೆಳಿಗ್ಗೆ 9:30ಕ್ಕೆ: ‘ನಿನಾದ’ ತಂಡದಿಂದ ಸಂಗೀತ ವೈಭವ.
​ಮಧ್ಯಾಹ್ನ 1:00ಕ್ಕೆ: ಅರೆಹೊಳೆ ಪ್ರತಿಷ್ಠಾನದ ‘ನಂದಗೋಕುಲ’ ಕಲಾವಿದರಿಂದ ನೃತ್ಯ ವೈಭವ.
​ಮಧ್ಯಾಹ್ನ 3:00ಕ್ಕೆ: ‘ಮಾಗಧ ವಧೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

​ಪತ್ರಿಕಾಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಮೋಹನ ವೈದ್ಯ, ಅರುಣ್ ಕುಮಾರ್ ಶೆಟ್ಟಿ, ಮನೋಹರ ಶೆಟ್ಟಿ, ಜಯರಾಮ ಶೆಟ್ಟಿ, ಉಮೇಶ್ ಕೊಠಾರಿ, ಅಜಿತ್ ಕುಮಾರ್, ಜ್ಯೋತಿ ಉದಯ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಶೇಟ್, ಮಂಜುನಾಥ ನಾಯ್ಕ, ಸುನಿಲ್ ಹಾಗೂ ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು. ನಿರ್ದೇಶಕ ಅಂಪಾರು ಕಿರಣ ಕುಮಾರ್ ಹೆಗ್ಡೆ ವಂದಿಸಿದರು.

Join WhatsApp

Join Now

Join Telegram

Join Now

Read more

ಕುಂದಾಪುರ: ಸುಜ್ಞಾನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಗೆ 9ನೇ ರ‍್ಯಾಂಕ್ – ಆಡಳಿತ ಮಂಡಳಿಯಿಂದ 50 ಸಾವಿರ ನಗದು ಪುರಸ್ಕಾರ

ಕುಂದಾಪುರ: ದ್ವಿತೀಯ PUC ಫಲಿತಾಂಶದಲ್ಲಿ ಸುಣ್ಣಾರಿ ಎಕ್ಸಲೆಂಟ್ ವಿದ್ಯಾರ್ಥಿಗಳ ಅಮೋಘ ಸಾಧನೆ. ಆಡಳಿತ ಮಂಡಳಿ ಮತ್ತು ಪೋಷಕರ ಸಂಭ್ರಮ.

ಎಕ್ಸಲೆಂಟ್ ಕಾಲೇಜು, ಸುಣ್ಣಾರಿ, ಕುಂದಾಪುರ: “ರಾಜ್ಯದಲ್ಲಿ ಅತ್ಯುತ್ತಮ ಸಾಧನೆ”

ಕುಂದಾಪುರ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಡೋಣ ಬಾ ಬೇಸಿಗೆ ಶಿಬಿರಕ್ಕೆ ಚಾಲನೆ.ಕ್ರೀಡಾಸಾಧಕರಿಗೆ ಸರಕಾರಿ ಉದ್ಯೋಗ ಅವಕಾಶ – ಕ್ರೀಡಾಪಟು ಪೊಲೀಸ್ ಅಧಿಕಾರಿ ನವೀನ್ ಕಾಂಚನ್

ಬ್ರಹ್ಮಾವರ : ಸುಜ್ಞಾನ ವಿದ್ಯಾ ಸಂಸ್ಥೆ ವಿದ್ಯಾರ್ಥಿವೇತನ ಪರೀಕ್ಷೆ ಉದ್ಘಾಟನೆ : ಅಂಕಗಳಿಕೆ ಜೊತೆಗೆ ಸಾಮಾಜಿಕ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಿ. ಮಾಜೀ ಸಂಸದ ಜಯಪ್ರಕಾಶ್ ಹೆಗ್ಡೆ

ಬ್ರಹ್ಮಾವರ: ಹೇರಾಡಿ ಹೊಸಳಾದಲ್ಲಿ ಮರಳು ಗಣಿಗಾರಿಕೆ – ಗುತ್ತಿಗೆದಾರರ ಮತ್ತು ನಾಗರೀಕ ನಡುವೆ ಜಟಾಪಟಿ, ಶಾಸಕರ ಹಾಗೂ ಸಂಸದರ ಮೌನ

Leave a Comment