ಕುಂದಾಪುರ: ನಿನ್ನೆ ಅವಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ – ಇಂದು ತಡೆಯಾಜ್ಞೆ? ಇದು ಕಾಂಗ್ರೆಸ್ ನಡೆ.

ಕುಂದಾಪುರ / ಕೋಟ : ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ವರ್ಚಸ್ಸು ಕಳೆದು ಕೊಂಡು ಎರಡು ದಶಕಗಳು ಕಳೆಯಿತು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೂ ಕೂಡ ಕರಾವಳಿಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ ವಿರಳ.
ಕರಾವಳಿ ಕಾಂಗ್ರೆಸ್ ಪಕ್ಷಕ್ಕೆ ಭದ್ರ ಕೋಟೆಯಂತಿದ್ದ ಕಾಲವಿತ್ತು. ಪ್ರತಾಪ್ ಚಂದ್ರಶೆಟ್ಟಿ,ಮನೋರಮ ಮಧ್ವರಾಜ್, ವಿನಯಕುಮಾರ್ ಸೊರಕೆ,ಗೋಪಾಲ ಪೂಜಾರಿ, ವಸಂತ ಸಾಲ್ಯಾನ್,ಗೋಪಾಲ ಭಂಡಾರಿ ಇವರುಗಳು ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆಯ್ಕೆಯಾದವರು.
ಆದರೆ ಇತ್ತೀಚಿನ ದಿನದಲ್ಲಿ ಹಿರಿಯರ ಖುರ್ಚಿ ಅಸೆ ಮುಪ್ಪಾದರೂ ಕಡಿಮೆಗೊಂಡಿಲ್ಲ.
ಪಕ್ಷ ಸಂಘಟನೆ ಮಾಡಲು ಆಗದಿದ್ದರೂ ಕೂಡ ಹತ್ತಿದ ಖುರ್ಚಿ ಇಳಿಯಲು ಮನಸ್ಸು ಮಾಡುತ್ತಿಲ್ಲ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಲೆಟರ್ ಹೆಡ್ ಉಪಯೋಗಿಸಿ ಒಂದಷ್ಟು ಸ್ವಭಿವೃದ್ಧಿ ಮಾಡಿ ಕೊಳ್ಳುವುದು ಬಿಟ್ಟರೇ ಪಕ್ಷ ಸಂಘಟನೆ ನಡೆಯುತ್ತಿಲ್ಲ.
ಕಾಂಗ್ರೆಸ್ ಪಕ್ಷಕ್ಕೆ ಹೋಲಿಸಿದಲ್ಲಿ ಬಿಜೆಪಿ,ಪಕ್ಷ ಸಂಘಟನೆಗೆ ದೊಡ್ಡ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದೆ.
ಜಿಲ್ಲೆ ಮತ್ತು ಬ್ಲಾಕ್ ಮಟ್ಟದಲ್ಲಿ ಕಡ್ಡಾಯವಾಗಿ ಎರಡೂವರೆ ವರ್ಷಕ್ಕೆ ಬದಲಾವಣೆ ಮಾಡುತ್ತಾರೆ.
ಹೆಚ್ಚಾಗಿ ಬಿಜೆಪಿ ಪಕ್ಷವು ಯುವಕರಿಗೆ ಪಕ್ಷ ಕಟ್ಟುವ ಜವಾಬ್ದಾರಿ ನೀಡುತ್ತಿರುವುದು ಗಮನರ್ಹ.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಹರಿಪ್ರಸಾದ್ ಶೆಟ್ಟಿ ಮೂರು ಅವಧಿ ನಿರಂತರವಾಗಿ ಖುರ್ಚಿಯಲ್ಲಿ ಕುಳಿತ್ತಿದ್ದಾರೆ. ಇವರ ಅವಧಿಯಲ್ಲಿ ಶಾಸಕರಾಗಲಿ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಆಗಲಿ ಗೆದ್ದ ದಾಖಲೆ ಇಲ್ಲಾ.
ಕೋಟ ಬ್ಲಾಕ್ ಕಾಂಗ್ರೆಸ್ ಪಕ್ಷದ ಶಂಕರ್ ಕುಂದರ್ 6 ಬಾರಿ ಅಂದರೆ ಬರೋಬ್ಬರಿ ಹದಿನಾರು ವರ್ಷಗಳ ಕಾಲ ನಿರಂತರವಾಗಿ ಅಧ್ಯಕ್ಷರಾಗಿದ್ದಾರೆ.
ಬುಧವಾರದಂದು ಕುಂದಾಪುರ ಮತ್ತು ಕೋಟ ಬ್ಲಾಕ್ ಕಾಂಗ್ರೆಸ್ ಪಕ್ಷಕ್ಕೆ ನೂತನ ಅಧ್ಯಕ್ಷರಾಗಿ ವಿಕಾಸ್ ಹೆಗ್ಡೆ ಮತ್ತು ತಿಮ್ಮ ಪೂಜಾರಿ ಇವರನ್ನು ಆಯ್ಕೆ ಮಾಡಿ ಆದೇಶ ನೀಡಲಾಗಿತ್ತು. ಆದೇಶ ಪ್ರತಿ ಎಲ್ಲೆಡೆ ಹರಿದಾಡಿ ಸುದ್ದಿಯಾಗಿತ್ತು.
ಆದರೆ 24 ಗಂಟೆಯಲ್ಲಿ ಅಂದರೆ ಇಂದು ಗುರುವಾರ ತಡೆ ಬಂದಿರುವ ಬಗ್ಗೆ ಮತ್ತೆ ಸುದ್ದಿಯಾಗಿದೆ.
ಕುಂದಾಪುರದ ವಿಕಾಸ್ ಹೆಗ್ಡೆಯವರು ವಾರಾಹಿ ಹೋರಾಟದಲ್ಲಿ ಹಿರಿಯ ನಾಯಕ ಪ್ರತಾಪ್ ಚಂದ್ರ ಶೆಟ್ಟಿಯಾವರೊಂದಿಗೆ ಹೋಗದೆ ಗೋಪಾಲ ಪೂಜಾರಿ ಜೊತೆಗೆ ಕೈ ಜೋಡಿಸಿದ್ದು ಈ ತಡೆಯಜ್ಞೆಗೆ ಕಾರಣ ಎನ್ನುವುದು ಅಲ್ಲಲ್ಲಿ ಗುಸುಗುಸು ಕೇಳಿ ಬರುತ್ತಿದೆ.
ಕೋಟಾದಲ್ಲಿ ಶಂಕರ್ ಕುಂದರ್ ಅವರು ಕೋಟ ಬ್ಲಾಕ್ ಕಾಂಗ್ರೆಸ್ ಪಕ್ಷದ ಸ್ವಂತ ಕಟ್ಟಡಕ್ಕೆ ಹೋರಾಟ ಮಾಡಿದ್ದರು. ಜೊತೆಗೆ ಕಷ್ಟದ ಸಂದರ್ಭದಲ್ಲಿ ಪಕ್ಷದಲ್ಲಿದ್ದು ಸೇವೆ ಮಾಡಿದರು ಕೂಡ ಯಾವುದೇ ರೀತಿಯಲ್ಲಿ ಉನ್ನತ ಹುದ್ದೆ ಕೊಟ್ಟಿಲ್ಲ ಎನ್ನುವ ನೋವು ಕಾರ್ಯಕರ್ತರಿಗೆ.
ಒಟ್ಟಿನಲ್ಲಿ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತ್ತು ಎನ್ನುವ ಪರಿಸ್ಥಿತಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರದ್ದು.





